ಧಾರವಾಡ ಆಗಷ್ಟೇ ಮಳೆಯಲ್ಲಿ ಮಿಂದು ತನ್ನ ಆರದ ಮೈಯನ್ನು ಬಿಸಿಲಿಗೊಡ್ಡಿ ನಿಂತಿತ್ತು. ಹೊಂಬಿಸಿಲಿಗೆ ಹುಲ್ಲಿನ ಮೇಲೆ ಮುತ್ತಿಟ್ಟು ನಿಂತ ಹನಿಗಳು ಮುತ್ತಿನಂತೆ ಹೊಳೆಯುತ್ತಿದ್ದವು. ಪ್ರಕೃತಿಯ ಆ ಸೌಂದರ್ಯ ಕಂಡು ಹೊದ್ದ ಚಾದರವ ಒದ್ದು ಕ್ಯಾಮರ ಬಗಲಿಗೇರಿಸಿ ಹೊರಟೆ ಬಿಟ್ಟೆ. ಕ್ಯಾಮರ ಕಣ್ಣಿನಲ್ಲಿ ಎಲ್ಲವನ್ನೂ ಸೆರೆಹಿಡಿಯುವ ಧಾವಂತದಲ್ಲಿ....
ಫೊಟೋ ಹೊಡೆಯಲೆಂದೇ ಹೊರಟಿದ್ದರಿಂದ ಸುತ್ತ ಮುತ್ತಲಿನ ಹುಲ್ಲು, ಕಸ, ಕಡ್ಡಿ, ಹುಳು, ಹುಪ್ಪಡಿ, ಕಲ್ಲು ಮುಳ್ಳು ಎಲ್ಲವೂ ಆಹಾರವಾದವು ನನ್ನ ಕ್ಯಾಮರಕ್ಕೆ; ಆದರೂ, ತೃಪ್ತಿ ಇಲ್ಲದ ಮನಸ್ಸು ಅದಕ್ಕೆ ಹಿಮ್ಮೇಳದಲ್ಲಿ ನಿಲ್ಲದ ಬಯಕೆಯ ಕೋರಸ್ಸು ಹಾಡುತ್ತಿತ್ತು.. ಕ್ಯಾಮರಾ ಕಣ್ಣಿಗೆ ದೊರಕದ್ದನ್ನು ದಕ್ಕಿಸಿಕೊಳ್ಳಲು ಹಾಗೆಯೇ ಸಾಗಿತ್ತು ನನ್ನ ಅಲೆದಾಟ..
ಆಗಲೇ ಕಂಡಿದ್ದು ತುಂಬಾ ಪರಿಚಯವಿರುವ ಹಕ್ಕಿ.. ಮೈ ತುಂಬ ಹತ್ತಿಯನ್ನು ಮೆತ್ತಿದಂತಹ ಶುಭ್ರ ಬಿಳಿ ತುಪ್ಪಳ, ೧೯ ರಿಂದ ೨೧ ಇಂಚು ಉದ್ದದ ದೇಹ, ಅತಿ ಚಿಕ್ಕದಲ್ಲದ ಬಲಿಷ್ಟ ಗುಲಾಬಿ ಕೊಕ್ಕು, ತಲೆಯನ್ನು ದೇಹದಿಂದ ತುಸು ದೂರಕ್ಕೆ ಬೇರ್ಪಡಿಸಿರುವ ಕತ್ತು ಮತ್ತು ನೀಳ ಕಾಲುಗಳ ಒಪ್ಪವಾದ ಸಮ್ಮಿಲನದ ಸುಂದರ ಹಕ್ಕಿ ಬೆಳ್ಳಗಿನ "ಬೆಳ್ಳಕ್ಕಿ".. Cattle Eagret.
ವಾಹ್ ! ಹುಡುಕುತ್ತಿದ್ದುದು ಇದೇ ಎಂದೆನಿಸಿ ಕ್ಯಾಮರ ಕಣ್ಣಿಗೊತ್ತಿ ಹಿಡಿದಾಗ ಕೊಕ್ಕಿನಲ್ಲಿ ಹಿಡಿದಿದ್ದ ಕಪ್ಪೆ ಕಂಡಿತ್ತು. ಚಿಲ್ಲರೆ ಕೇಳಿದ್ರೆ ಸಿಕ್ಕಿದ್ದು ನೋಟು ಅನ್ನುವಷ್ಟು ಖುಷಿಯಾಗಿ ಬೇರೆ ಬೇರೆ ದಿಕ್ಕುಗಳಿಂದ ಬೇರೆ ಬೇರೆ ಕೋನದಲ್ಲಿ ಫೊಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.. ತನ್ನ ಬೇಟೆಯನ್ನು ಕೊಕ್ಕಿನಲ್ಲಿ ಹಿಡಿದು ಗಂಬೀರವಾಗಿ ಕತ್ತೆತ್ತಿ ನಿಂತಿದ್ದ ಬೆಳ್ಳಕ್ಕಿಯು ನನಗೇ ಪೋಸು ಕೊಡುವಂತಿತ್ತು. ಅದನ್ನೆಲ್ಲಾ ದೂರದಿಂದಲೇ ಗಮನಿಸುತ್ತಿದ್ದ ಮತ್ತೊಂದು ಹಕ್ಕಿಯು ತಾನೂ ಫ್ರೇಮಿನಲ್ಲಿ ತೂರಿಕೊಳ್ಳಲ್ಲೆ೦ಬಂತೆ ನಿಧಾನವಾಗಿ ಬರುತ್ತಿತ್ತು. ಆದರೆ ಅದರ ಗಮನವೆಲ್ಲಾ ಇದ್ದದ್ದು ಕಪ್ಪೆಯ ಕಡೆಗೆ. ಪೋಸು ಕೊಡುತ್ತಿದ್ದ ಹಕ್ಕಿಯು ತನ್ನ ಬೇಟೆಗೆ ಒದಗಿದ ಅಪಾಯವನ್ನು ಗ್ರಹಿಸಿ ಪ್ರತಿಸ್ಪರ್ಧಿಯನ್ನೆದುರಿಸಲು ತಯಾರಾಗಿ ನಿಂತಿತು. ಆಮೇಲೆ ನಡೆದದ್ದೆಲ್ಲಾ ಬಾಡೂಟಕ್ಕಾಗಿ ಹೋರಾಟಾ ಕಾದಾಟ, ಕಪ್ಪೆಗೋ ಪ್ರಾಣ ಸಂಕಟ...
ಹತ್ತಿರದಿಂದ ಗೊತ್ತಿರುವ ಹಕ್ಕಿಯಾದರೂ ಗೊತ್ತಿರದ ಹಲವು ಸಂಗತಿಗಳಿವೆ ಬೆಳ್ಳಕ್ಕಿಗಳ ಬಗ್ಗೆ. ಸಾಮಾನ್ಯವಾಗಿ ಕೆರೆ, ಹಳ್ಳ-ಕೊಳ್ಳ, ನದಿ ಹಾಗೂ ಗದ್ದೆಗಳಂಚಿನಲ್ಲಿ ಕಾಣಸಿಗುವ ಇವು ಹಳ್ಳಿಗಳಲ್ಲೆಲ್ಲಾ "ಗೋವಕ್ಕಿ" ಎಂದೆ ಪರಿಚಿತ, ವೈಜ್ಞಾನಿಕವಾಗಿ Ardidae ಕುಟುಂಬದ Egret (ಬೆಳ್ಳಕ್ಕಿ) ಗುಂಪಿಗೆ ಸೇರುವುದರಿಂದ ರೂಢಿಯಲ್ಲಿ ಇದನ್ನು ಗೋವಕ್ಕಿ ಎನ್ನದೇ ಬೆಳ್ಳಕ್ಕಿ ಎನ್ನುವುದುಂಟು.
ಚಳಿಗಾಲದಲ್ಲಿ ವಲಸೆ ಹೋಗುವ ಬೆಳ್ಳಕ್ಕಿಗಳು ಬಹಳ ವರ್ಷಗಳ ಹಿಂದೆ ಏಶಿಯಾ, ಯುರೋಪ್ ಮತ್ತು ಆಫ್ರಿಕಾದಲ್ಲಿ ಮಾತ್ರ ಕಾಣಸಿಗುತ್ತಿದ್ದವು. ಕಾಲ ಕ್ರಮೇಣ ಇವು ತಮ್ಮ ಸಂತಾನ ವ್ಯಾಪ್ತಿಯನ್ನು ಎಲ್ಲಾ ಖಂಡಗಳಿಗೂ ವಿಸ್ತರಿಸಿಕೊಂಡವು. ಅವು ಹೊಂದಿಕೊಳ್ಳುವ ಸ್ವಭಾವದ ಸಮಾಜ ಜೀವಿಗಳು. ಗುಂಪುಗಳಲ್ಲಿ ವಾಸಿಸುವ ಬೆಳ್ಳಕ್ಕಿಗಳು, ನೂರಾರು ಸಂಖ್ಯೆಯಲ್ಲಿ ಒಂದೇ ಮರದಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಗೂಡುಗಳನ್ನು ಬೇರೆ ಪಕ್ಷಿಗಳ ಜೊತೆ ಹಂಚಿಕೊಳ್ಳುವುದೂ ಉಂಟು.
ಬೆಳ್ಳಕ್ಕಿಯದು ದನಗಳ ಜೊತೆಯೂ ಒಂಥರಾ ಅವಲಂಬಿತ ಗೆಳೆತನ. ಚಿಕ್ಕವರಿದ್ದಾಗ ನಾವು ಕೈಯಲ್ಲಿ ಕೋಲಿದ್ದರೂ ದನ ಎಮ್ಮೆಗಳ ಹತ್ತಿರ ಹೋಗಲು ಹೆದರುತ್ತಿದ್ದರೆ ತಾನು ಮಾತ್ರ ಯಾವುದೇ ಅಳುಕು ಅಂಜಿಕೆಯಿಲ್ಲದೆ ಅವುಗಳ ಮೇಲೆ ಸವಾರಿ ಮಾಡುತ್ತಾ ವಿಶೇಷವಾಗಿ ಆಕರ್ಷಿಸಿತ್ತು ಬೆಳ್ಳಕ್ಕಿ. ಅವು ದಿನದ ಕೂಳನ್ನರಸಿ ಒಂಟಿಯಾಗಿ ಇಲ್ಲವೇ ಗುಂಪಿನಲ್ಲಿ ಹೋಗುತ್ತವೆ. ಕಪ್ಪೆ, ಮೀನು, ಉಣುಗು, ಕೀಟ, ಎಲೆ ಮುಂತಾದವುಗಳನ್ನು ಆಹಾರವಾಗಿ ಸೇವಿಸುವ ಇವು, ಶಕ್ತಿ ಉಪಯೋಗಿಸದೆ ಬೇಟೆ ಹಿಡಿಯುವುದರಲ್ಲಿ ನಿಸ್ಸೀಮರು. ಕಚ್ಚಿ ರಕ್ತ ಹೀರುವ ಕೀಟ ಉಣುಗುಗಳಿಂದ ರಕ್ಷಿಸಿಕೊಳ್ಳಲು ದನಗಳು ಬೆಳ್ಳಕ್ಕಿಗಳನ್ನು ನಂಬಿದ್ದರೆ ತಮ್ಮ ಆಹಾರವನ್ನು ಹೆಚ್ಚೇನೂ ಶ್ರಮವಿಲ್ಲದೆ ಪಡೆಯಲು ಇವು ದನಗಳನ್ನು ಅವಲಂಬಿಸಿವೆ.
ತನ್ನ ಬೆಳ್ಳನೆಯ ಬಣ್ಣದಿಂದಾಗೆ ಬೆಳ್ಳಕ್ಕಿ ಎಂದು ಹೆಸರು ಪಡೆದು ಕೊಂಡಿದ್ದರೂ ಕೆಲವೊಮ್ಮೆ ಅವುಗಳ ಗರಿಯ ಬಣ್ಣ ಬದಲಾಗುವುದುಂಟು. ಸಂತಾನೋತ್ಪತ್ತಿಯ ಕಾಲದಲ್ಲಿ ತಲೆ, ಎದೆ ಮತ್ತು ಬೆನ್ನಿನ ಭಾಗದ ಗರಿಗಳು ತೆಳು ಕಂದು (buff feather) ಬಣ್ಣದ್ದಾಗಿರುತ್ತವೆ. ಆಗ ಅವು ತಮ್ಮ ಗೂಡು ಕಟ್ಟಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಗಂಡು ಹಕ್ಕಿಯದು ಸಾಮಾನು ಸರಂಜಾಮು (ಕಡ್ಡಿ , ಎಲೆ) ಗಳನ್ನು ಸಂಗ್ರಹಿಸುವ ಕೆಲಸವಾದರೆ, ಹೆಣ್ಣು ಹಕ್ಕಿಯದು ಮೇಸ್ತ್ರಿ (ಕಟ್ಟುವ) ಕೆಲಸ. ಸಾಮಾನ್ಯವಾಗಿ ಒಟ್ಟಿಗೆ 2 ರಿಂದ 6 ಮೊಟ್ಟೆಗಳನ್ನಿಡುವ ಬೆಳ್ಳಕ್ಕಿ 18-30 ದಿನಗಳವರೆಗೆ ಕಾವು ಕೊಡುತ್ತದೆ. ನಂತರವಷ್ಟೇ ಚಿಕ್ಕ ಚಿಕ್ಕ ಮರಿಗಳು ಈ ಪ್ರಪಂಚಕ್ಕೆ ಕಾಲಿರಿಸುವವು ...
ಟಪ್..! ತಲೆ ಮೇಲೆ ಬಿತ್ತು ಒಂದು ಹನಿ..
ಬೀಸುತ್ತಿದ್ದ ತಂಪನೆ ಗಾಳಿ, ಹದವಾಗಿದ್ದ ಬಿಸಿಲು, ಎರಡು ಹಕ್ಕಿಗಳ ಕಾದಾಟದ ದೃಶ್ಯ ಇವುಗಳಲ್ಲಿ ಮೈ ಮರೆತಿದ್ದ ನನಗೆ ಮರದಿಂದ ಒಂದು ಹನಿ ನೀರು ತಲೆ ಮೇಲೆ ಬಿದ್ದಾಗಲೇ ಎಚ್ಚರವಾಗಿದ್ದು. ನಡೆಯುತ್ತಿದ್ದ ಹಕ್ಕಿಗಳ ಆಟ ನಂತರ ಹಂಚಿಕೊಂಡು ತಿಂದ ಊಟದ ನೋಟವನ್ನು ಹತ್ತಿರದಿಂದಲೆ ನೋಡುತ್ತಾ ಏನೋ ಖುಷಿ. ಸಂಭ್ರಮದಲ್ಲಿ ಮುಳುಗಿ ಹೋಗಿದ್ದೆ. ಆಗಲೇ ಹೊಳೆದಿತ್ತು "ಅಯ್ಯೋ.!! ಇವುಗಳ ಫೋಟೋ ಹೊಡೆಯುವುದೇ ಮರೆತೆನಲ್ಲಾ..".
ಹಾಳಾದ ಮರೆವನ್ನು ದೂಷಿಸುತ್ತ, ಮತ್ತೊಮ್ಮೆ ಹೀಗಾಗದಿರಲೆಂದು ಆಶಿಸುತ್ತಾ ಅಷ್ಟೇನೂ ಬೇಸರಗೊಳ್ಳದೆ ಹೊರಟೆ ನಾನು ಗಮ್ಯದ ಕಡೆಗೆ....
ಅದ್ಭುತ ಅನುಭವದ ಖುಷಿಯಲ್ಲಿ ಮನಸ್ಸು ತನ್ನಷ್ಟಕ್ಕೆ ಗುನುಗುತ್ತಿತ್ತು...
ಬಾಟಮ್ ಸಿಪ್: ತಲೆ ಇದ್ದೂ ನೆಲೆ ಇದ್ದೂ ಕೂಡಿ ಬಾಳಲೊಲ್ಲದ ಮನುಜನ್ಗೆ; ತನ್ನಂತೆ ಬೆರೆತು ಬಾಳೆಂತೆ ಬಾನಾಡಿ..!??
- ಶಶಿ ಭಟ್ ಮತ್ತು ಹರ್ಷ ಭಟ್
Monday, February 28, 2011
ತನ್ನಂತೆ ಬೆರೆತು ಬಾಳೆಂದಿತು ಮನುಜಂಗೆ ಬಾನಾಡಿ.!
Posted by harsha bhat at 10:39 PM 0 people mind to share what they feel
Subscribe to:
Posts (Atom)